ಪಟ್-ಪಟಿ ಮಂಜ್ಯಾ

Ravi Ranjan
ಮಂಜುನಾಥ ಕಟ್ಟಿಮ್ಯಾಲ ಕುಂತು ಅವ್ವ ಹಾಕಿಕೊಟ್ಟಿದ್ದ ಗೊಂಜಾಳ ರೋಟ್ಟಿ — ಖಾರಬ್ಯಾಳಿ ಜೋಡಿ ಅರ್ದ ಉಳ್ಳಾಗಡ್ಡಿ ತಿನ್ನಕೊತ ಅಪ್ಪ ಬರೋ ದಾರಿ ನೊಡಾಕತ್ತಿದ್ದ. ಅವಂಗ ಊಟದ ಮ್ಯಾಲಿನ ಕಾಳಜಿಕಿಂತ, ಅಪ್ಪ ಎಲ್ಲಿ ಮೆಟ್ಟ ತೋಗತಾನ ಅನ್ನೋ ಅಂಜಕಿನಾ ಭಾಳಾಗಿತ್ತು. ಕಿನಾಲ್ಕ ನೀರ ಬಿಟ್ಟಾರ್, ಗೊಂಜಾಳಕ ನೀರ ಹಾಸಿ ಬಾರಲೇ ಮಂಜ್ಯಾ ಅಂತ ನಾಲಕ ದಿನದಿಂದ ಹೇಳಿದ್ರು ಇವ ಸೊಂಟದ್ ಮ್ಯಾಲ ಪ್ಯಾಂಟಾ ಏರಿಸಕೊಂಡು ಊರ ತಿರುಗುವುದೋರಳಗ ಇದ್ದ. ಇದ್ದ ಒಂದ ಎಮ್ಮಿಗೆ ಹಾಕಾಕ ಮೇವಿಲ್ಲ ನೀವರೆ ಹೊಲದ ತನಕಾ ಹೋಗಿ ಬರ್ರಿ ಅಂತ ಹ್ಯಾಂತಿ ಹೇಳಿದಕ್ಕ ಮುಂಜಾನೆ ಕುಡಗೋಲು ಮತ್ತ ಒಂದು ತಟ್ಟಿನ ಚೀಲಾ ತಗೊಂಡು ಹೊಲಕ್ಕ ಹೊದಾವ ಉಣ್ಣು ಹೊತ್ತಾದ್ರು ಮನಿಗೆ ಬಂದಿರಲಿಲ್ಲ. ಮಂಜ್ಯಾ ಹಾದಿ ಕಾಯಕೊತನ ಮೂರ ರೋಟ್ಟಿ ಮುಗಿಸಿ ನುಚ್ಚಾ- ಮಜ್ಜಿಗಿ ಸಾರಿಗೆ ಬಂದಿದ್ದ. ಅಪ್ಪ ಮೇವ ದಾವನ್ಯಾಗ ಇಟ್ಟು, ಕೈ ತೊಳಗೊಂಡು ಪಡಸಾಲ್ಯಾಗ ಉಟ್ಟಕ್ಕ ಕುಂಡ್ರಾಕ ಮಂಜ್ಯಾ ಅವ್ವನ ಸೆರಗಾ ಹಿಡದು ಕಣ್ಣ ಸನ್ನಿಮಾಡುದ ನೋಡಿಯು ನೋಡಲಾರದಂಗ — ಅಪ್ಪ ಉಂಡೆದ್ದ — ತಂಬಕಾ ತಿಕ್ಕಿ ಒಸಡ್ಯಾ ನಡುವ ಇಟಕೊಂಡು ಕಟ್ಟಿ ಹಿಡಿದಿದ್ದ. ಹೆಂಡತಿ ಅಲ್ಲೆ ಬಾಗಲ ಸಂದ್ಯಾಕ ಕುಂತು “ನಮ್ಮ ಮಂಜಪ್ಪ ಬ್ಯಾಂಗಳೂರಿಗೆ ಹೊಗತಾನ ಅಂತಾನ” ಅಂದದಕ್ಕ ಅಪ್ಪ, ಅವ್ವ ಹಾಕಿದ್ದ ಟೊಮೆಟೋ ಸಸ್ಯಾಗ ಪಿಚಕಂತ ಉಗುಳಿ ಮತ್ತ ತನ್ನ ಬಾಯಿ ಕೆಲಸ ಶುರು ಮಾಡಿದ್ದ. ಹಣ್ಣಾಗಲಾರದ ಟೊಮೆಟೊಕ ಕೆಂಪ ಬಣ್ಣ ಬಳದಾಂಗ ಆತು, ಹೆಂತಿ ಸ್ವಲ್ಪ ಸಿಟ್ಟಲೇನ್ “ಅಲ್ಲ ಇರಾವ ಒಬ್ಬ, ನೀವ ಹಿಂಗ ಅಪ್ಪ-ಮಗ ಮಾತ ಬಿಡಕೊಂಡ ಕುಂತರ” ಅಂತ ಮತ್ತ ಮಗನ ಪರವಾಗಿ ವಾದ ಮಂಡಿಸಿ ತನ್ನಗಾಗಿದ್ದಳು ಶಾಂತವ್ವ. “ಅವಂಗೇನ ಮುಕಳ್ಯಾಗ ಹಲ್ಲ ಬಂದಾವೇನ? ಹೊರಗ ಬಂದ ಮಾತಾಡಾಕ ಸೋಕ್ಕ ಮೈಯಾಂದ ? ಅಂತ ಅಪ್ಪ ಗದರಿಸಿದ ತಡ. ಮಂಜ್ಯಾ ಇಲ್ಲೆ ಇದ್ರ ಅಪ್ಪನ ಮೈಯಾಗ ದೇವರ ಬರ್ತದ ಅಂತ ಅಂಗಿ ಹಾಕೊಂಡು ಜಾಗಾ ಖಾಲಿ ಮಾಡಿದ್ದ. ಹಿಂಗ ಒಂದ ವಾರ ಅವ್ವನ ಪುಣ್ಯದಿಂದ ಅಪ್ಪನ ಜೊಡಿ ಹಗ್ಗ ಜಗ್ಗ್ಯಾಡಿ, ಹೊಲದ ಮೇಲೆ ಲೋನ್ ತಗಿಸಿ ಹೊಸ ಗಾಡಿ ತಗೊಂಡ. ಹೊಲದ ಮ್ಯಾಲ ಲೋನ್ ತಗಿಬಾರದಿತ್ತು ಕಾಳಪ್ಪ ಅಂದವರಿಗೆ, “ಇರಾವ ಒಬ್ಬ, ಏನೋ ಪ್ಯಾಟ್ಯಾಗ ನೌಕರಿ ಮಾಡತಾನಂತ ಪಟಪಟಿ ಬೇಕಂದ, ಇನ್ನೆನ ನಾವರೆ ಎಷ್ಟ ದಿನದವರು” ಅಂತ ಊರ ಅಗಸಿ ಕಟ್ಟಿ ಮ್ಯಾಗಿನ ಪಂಚಾಯಿತಿ ಮುಗಿಸಿ ಮಗನ್ನ ಬೆಂಗಳೂರಿಗೆ ಕಳಿಸಿಕೊಟ್ಟಿದ್ದ.
ಮಂಜ್ಯಾ 500 ರೊಪಾಯಿ ಕಟ್ಟಿ ಕಂಪನಿ ಟಿಶರ್ಟ್ ಮತ್ತ ಬ್ಯಾಗ ತಗೊಂಡು ಗಾಡಿ ಹಿಂದ ಕಟ್ಟಿ ಹೊಸ ಕೆಲಸಕ್ಕ ಸೇರಿದ್ದ. ಮುಂಜಾನೆ ಮನಿ ದೇವರ ಈರಬದ್ರಗ ಕೈ ಮುಗದ ತಳ್ಳು ಗಾಡ್ಯಾಗ ಇಡ್ಲಿ-ವಡಾ ತಿಂದು ಜಾಗಾ ಬಿಟ್ರ ರಾತ್ರಿಗ ಮನಿಗ ಬರ್ತಿದ್ದ. ಹೊಸ ಆರ್ಡರ್ ಬಂದಾಗೊಮ್ಮೆ ಮೊಬೈಲ್ ಹೊಡಿಯುವ ಸೈರನ್ ಮೊದಮೊದಲ ಹನಮಪ್ಪನ ಗುಡ್ಯಾಗ ಬಾರಸು ಕರೆಂಟ್ ಗಂಟಿಹಂಗ ಅನ್ನಿಸಿದ್ರು, ಬರಬರುತಾ ಮನಿ ಮುಂದ ಹಾದ ಹೋಗು ಸರಕಾರಿ ಬಸ್ಸ ಹಾರ್ನ್ ಹಂಗ ಕಿವ್ಯಾಗ ಚುಚ್ಚತಿತ್ತು. ಬೆಂಗಳೂರಿನ ದೆವ್ವದಂತ ತೆಗ್ಗಿನಾಗ ರಸ್ತಾ ಹುಡಕಿ ಗಾಡಿಹೊಡಿಯೋದು ಮೈಯಲ್ಲಾ ಮರಗತಿತ್ತು. ತಿಂಗಳಿಗೊಮ್ಮೆ ಮೈಬಲ್ ಕರೆನ್ಸಿ, ಗಾಡಿ ಪೆಟ್ರೊಲ್, ನಾಷ್ಟಾ-ಚಾ, ಮನಿ ಬಾಡಿಗಿ ಎಲ್ಲಾ ಕಳದ ಕೈಯಾಗ ಒಂದ 3 ಸಾವಿರ ಉಳದ್ರ ಹೆಚ್ಚಿಂದು. ವಾರಕೊಮ್ಮೆ ಪೋನ್ ಮಾಡಿ ಅವ್ವ, ‘ಹೊಟ್ಟಿ ತುಂಬಾ ಊಟ ಮಾಡೋ ಮಗನಾ, ನೊಡಕೊಂಡ ಪಟಪಟಿ ಹೋಡಿ. ಯಾರ ಜೊಡಿ ಜಗಳ ತಗಿಬ್ಯಾಡ, ಇಲ್ಲದ ಹೊಲಸ ಚಟಾ ಮಾಡಬ್ಯಾಡ’ ಅಷ್ಟ ಹೆಳತಿದ್ಳು. ಅಪ್ಪಗ ಸೊಂಟ ಉಳಕಿದ್ದು, ತನಗ ಹಲ್ಲ ಬ್ಯಾನಿ ಬಂದಿದ್ದ ಹೇಳಲೇ ಇಲ್ಲ.
ಇದ್ದ ಒಂದ ಎಮ್ಮಿಗೆ ಹಾಕಾಕ ಮೇವಿಲ್ಲ ನೀವರೆ ಹೊಲದ ತನಕಾ ಹೋಗಿ ಬರ್ರಿ ಅಂತ ಹ್ಯಾಂತಿ ಹೇಳಿದಕ್ಕ ಮುಂಜಾನೆ ಕುಡಗೋಲು ಮತ್ತ ಒಂದು ತಟ್ಟಿನ ಚೀಲಾ ತಗೊಂಡು ಹೊಲಕ್ಕ ಹೊದಾವ ಉಣ್ಣು ಹೊತ್ತಾದ್ರು ಮನಿಗೆ ಬಂದಿರಲಿಲ್ಲ. ಮಂಜ್ಯಾ ಹಾದಿ ಕಾಯಕೊತನ ಮೂರ ರೋಟ್ಟಿ ಮುಗಿಸಿ ನುಚ್ಚಾ- ಮಜ್ಜಿಗಿ ಸಾರಿಗೆ ಬಂದಿದ್ದ.

Image by Ravi Ranjan
ಅವತ್ತು ಸಂಡೆ ಆಗಿದಕ್ಕ ಆರ್ಡರ್ ಮ್ಯಾಲ ಆರ್ಡರ್ ಬರಕಾತಿದ್ದವು, ಮಂದಿ ಎಟ್ಟರೆ ತಿಂತಾರಪಾ ಅಂತ ಮಂಜ್ಯಾ ತನ್ನ ಜೋಡಿ ಇದ್ದವರಿಗೆ ದೊಡ್ಡ ಕಣ್ಣ ಮಾಡಕೊಂಡು ಹೇಳಿದ್ದ — ಅವರೇನು ಇವಂಗ ದಿನಾ ಬೇಟಿ ಆಗುದಿಲ್ಲ, ಅದಕಿಂತ ಅವರ್ಯಾರು ಎಲ್ಲಿಂದ ಬಂದಾರು ಅನ್ನೂದು ಅಷ್ಟೆನು ಗೊತ್ತಿರಲಿಲ್ಲ. ತಮಿಳ, ತೆಲಗು ಹಿಂದಿ ಹಿಂಗ ನಾನಾ ನಮಿನಿ ಮಾತಾಡವರ ನಡು ಮಂಜ್ಯಾ ಮತ್ತು ಅವನ ಹಂಗ ನಾಲಕ ಮಂದಿ. ಮಂಜಾನೆ ಒಂದ ದಿಕ್ಕ ಒಳಗ ಶುರು ಆಗಿದ್ದ ಕೆಲಸ, ರಾತ್ರಿ ಆಗುದ್ರೋಳಗ ಮತ್ತೊಂದ ದಿಕ್ಕಿಗೆ ಮುಗಿತಿತ್ತು. ಗುದ್ದಾಡಿ ದಿನಕ್ಕ 60 – 70 ಕಿಮಿ ಗಾಡಿ ಹೊಡದ್ರ 1 ರಿಂದ 1500 ತನಕ ಬರತಿತ್ತು. ಆರ್ಡರ್ ಬಂದ ಕುಡಲೇ ಮೋಬೈಲ್ ಒದರತಿತ್ತು. ಇವಾ ಅದ ಕರಕೊಂಡ ಹೊದ ಕಡೆ ಹೊಗುದು, ಹೋಟೆಲನವ ಪ್ಯಾಕ್ ಮಾಡಿ ಕೊಟ್ಟಿದ್ದು ಸಿದಾ ಬ್ಯಾಗ್ ಒಳಗ ಇಟಕೊಂಡು ಅದ ಕೊರಕೊಂಡ ಹೋದ ಕಡೆ ಕೊಟ್ಟಬರುದು. ಡಬ್ಬಿಯೊಳಗ ಒಣಾದು-ಹಸಿದು, ಖಾರದ್ದು — ಸಿಯಂದು, ಎನಿದ್ರು ಅವನಿಗೇನು ಗೊತ್ತಾಗುದಿಲ್ಲ. ಮಳಿ ಬರಲಿ, ಟ್ರಾಪಿಕ್ ಜಾಮ್ ಆಗಲಿ ಕಂಪನಿದವರಿಗೆ ಮತ್ತ ತಿನ್ನಾವರಿಗೆ ಏನು ಪರಕ ಬಿಳುದಿಲ್ಲಾ, ಎಲ್ಲಿ ಇವನ ತಿಂದ ಬಿಟ್ರ ಅಂತ ಹೆದರಿಕಿ ಇರಬೇಕು ಪಾಪ. ಲೇಟ್ ಆದ ಕೂಡಲೇ ಪೋನ್ ಮ್ಯಾಲ ಪೋನ್ ಮಾಡಿ ಜಲ್ದಿ ಬಾ ಅಂತ ಹೇಳು ಮಂದಿ, ಟೈಂ ಒಳಗ ಹೊಗಲಿಲ್ಲ ಅಂದ್ರ ರೊಕ್ಕ ಕಟ್ ಮಾಡ್ತೆನಿ ಎನ್ನೊ ಕಂಪನಿ. ಇದರ ನಡುವ ಸುಮ್ಮ ಸುಮ್ಮನಾ ಕೈ ಅಡ್ಡಹಾಕಿ ತರಬುವ ಪೋಲಿಸರು, ತೆಗ್ಗ ಬಿದ್ದ ರೋಡನ್ಯಾಗ ಸರ್ಕಸ್ ಮಾಡೋ ಆಟೋದವರು. ಎಲ್ಲರನು ತಪ್ಪಿಸಿ ಹೊಗುವುದರೋಳಗ ಏಳುಹನ್ನಾಡ್ಯಾ ಆಗತಿತ್ತು — ಚಾ ಕುಡಕೊತ ಕಥಿ ಹೆಳತಿದ್ದ ಮಂಜ್ಯಾಗ ಅವತ್ತು ಸ್ವಲ್ಪ ಸಿಟ್ಟೊಳಗಿದ್ದ. ಅಗದಿ ಟೈಂ ಒಳಗ ಹೋಟೆಲ್ ಹೊಗಿದ್ರು ಇನ್ನು ಅಡಗಿ ತಯಾರಿಲಿಲ್ಲ. ಅದು ಅವನ ಪ್ರಾಬ್ಲಮ್ ಅಲ್ಲ ಆದ್ರು ಆರ್ಡರ್ ರೆಡಿ ಆಗಿತಿ ಅಂತ ಆಪ್ ಹೊಯ್ಕೊಂಡಾಗ ಇವಾ ಗಾಬರಿ ಆಗಿದ್ದ. ಹೋಟೆಲ್ಲ್ ನವಾ ಡಬ್ಬಿ ಕೊಡವಲ್ಲ ಇವರ ನೊಡಿದ್ರ ಇನ್ನ ಐದ ನಿಮಿಷದಾಗ ಕಲೆಕ್ಟ ಮಾಡಕೋ ಅಂತ ಟೈಂ ಬ್ಯಾರೆ ಹಚ್ಚೆತಿ. ಕಡಿಗೆ ತಲಿ ಕೆಟ್ಟು ಕಂಪನಿಗೆ ಪೋನ್ ಮಾಡಿದ್ರ ಅದು, ಇಂಗ್ಲಿಷ್ ಗಾಗಿ ಒಂದನ್ನು ಒತ್ತಿ, ಹಿಂದಿಗಾಗಿ ಎರಡನ್ನು ಒತ್ತಿ ಕನ್ನಡ ಬರುವುದೊರಳಗ ಕೊಟ್ಟ ಐದ ನಿಮಿಷ ಮುಗುದ ಹೊಗಿರತೈತಿ. ಹಿಂಗಾದರ ಬರೊಬರಿ ಆಗುದಿಲ್ಲ ಅಂತ ಹೋಟೆಲನವಂಗ ಕೇಳಿದಕ್ಕ ಜಗಳ ತಗದು ಹೊರಗ ಕಳಿಸಿದ್ದ. ಬಾಳೊತ್ತ ಕಾದ ಮ್ಯಾಲ ಮಂಜ್ಯಾನ ಸರದಿ ಬಂತು. ಹೊಟೆಲ್ ನವ ಗುರಾಸಕೊತನ ಇವಂಗ ಡಬ್ಬಿ ಕೊಟ್ಟು “ಕಹಾ ಕಹಾ ಸೇ ಆತಾ ಹೈ ಲೋಗ್” ಅಂತ ಒಳಗ ಹೋಗಿದ್ದ. ಮಂಜಾ ನಾನೇನ್ ಬೇಕ್ಂತ ಬರ್ತಿನೇನ ? ಅಂತ ತಲಿ ಕೆಳಗ ಮಾಡಕೊಂಡ ಗಾಡಿ ಹತ್ತಿದ್ದ. ಅವತ್ತು ಆರ್ಡರ್ ಲೇಟ್ ಆಗಿದಕ್ಕ 350 ರೂಪಾಯಿ ದಂಡಾ ಹಾಕಿದ್ರು ಕಂಪನಿದವರು.
ರಾತ್ರಿ ಒಂದ ಹತ್ತಿದ್ದ ಮಳಿ ಈಗಾ ಸ್ವಲ್ಪ ತಣ್ಣಗಾಗಿತ್ತು. ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡ ಮೋಬೈಲ್ ಸ್ಟಾಂಡಿಗೆ ಹಾಕಿ ಆನ್ ಮಾಡಿದ. ಆಪ್ ಮಾಸ್ಕ ಹಾಕಿದ್ದು ಪೋಟೊ ತಗೋ, ನಮ್ ಕಂಪನಿದ ಬ್ಯಾಗ್ ಟೀ ಶರ್ಟ್ ಹಾಕೊಂಡ ಸೆಲ್ಪಿ ತಗೋ ಅಂತ ಆರ್ಡರ್ ಮಾಡಿದಾಗ ಇವಾ ಅದು ಹೇಳಿದಂಗ ಕೇಳಿದ್ದ. ಆರ್ಡರ್ ಬಂದಾಗ ದಿನಾ ಮಾಡುವಂಗ ಹೋಟೆಲ್ ಮುಂದ ಹೋಗಿ ಒಂಟಿ ಸ್ಟ್ಯಾಂಡ್ ಹಾಕೋಂಡು ಕುಂತ. ನಿನ್ನೆ ಅವ್ವ ಪೋನ್ ಮಾಡಿ, ರೇಷನ್ ಕಾರ್ಡಗೆ ಹೆಬ್ಬಟ್ಟ ಹಾಕಾಕ ಬರಬೇಕಂತ ಹಂಗ ಅದಕ್ಕ ಆಧಾರ್ ಕಾರ್ಡ ಕೋಡಬೇಕು ಯಾವಾಗ ಬರ್ತಿ ಅಂತ ಕೇಳಿದ್ದಳು. ಇವಾ ಕಿಸೆಯೊಳಗ ರೊಕ್ಕಿಲ್ಲ ಊರಿಗೆ ಹೆಂಗ ಹೋಗುದು ಅಂತ ಯೋಚನೆ ಮಾಡಬೇಕಾದರ ಗಾಡಿ ಮ್ಯಾಲ ಬಂದ ಸಂಗಾಟದವರು ಇವಂಗ ಇವತ್ತ ಯಾವದೂ ಡೆಲಿವೆರಿ ಮಾಡೊಂಗಿಲ್ಲ, ಸ್ಟೈಕ್ ಮಾಡೆವಿ ಬಾ ಅಂತ ಇವನ್ನ ಏಳಕೊಂಡ ಹೋಗಿದ್ರು. ಇವಾ ಮತ್ತ ಆರ್ಡರ್ ಕಾನ್ಸಲ್ ಮಾಡಿದಕ್ಕ 300 ದಂಡ ಕಟ್ಟಾಗಿತ್ತು. ಆಕಡೆ ಊರಿಗೆ ಇವಾ ಬಂದಿಲ್ಲ, ಹೋಗಲಿ ಗಂಡ — ಹೆಂಡತಿ ಇಬ್ಬರದ ರೇಷನ್ ತಗೊಳುನು ಅಂತ ರೆಷನ್ ಅಂಗಡಿಗೆ ಹೋದ್ರ ಇವತ್ತು ಸರ್ವರ್ ಡೌನ್ ಐತಿ ಅಂತ ವಾಪಸ್ಸ ಕಳಿಸಿದ್ರು. ಮೊದಲ ಲಿಸ್ಟೊಳಗ ನಿಮ್ಮ ಹೆಸರಿಲ್ಲ ಅಂದ್ರು, ಅದಾದ ಮೇಲೆ ನಿಮ್ಮ ಮನಿಯೊಳಗ ಟಿವಿ ಗಾಡಿ ಐತಿ ಬಿಪಿಲ್ ಕೋಡುದಿಲ್ಲ ಅಂದ್ರು, ಆಮೇಲ ರೆಷನ್ ಕಾರ್ಡ ಆಧಾರ್ ಲಿಂಕ್ ಇಲ್ಲ ಅಂತ ವಾಪಸ್ ಕಳಿಸಿದ್ರು, ಅಲ್ಲಿ ಇಲ್ಲಿ ಕಾಡಿಬೇಡಿ ಊರ ಚೇರಮನ್ ಮನಿ ಮುಂದ ನಾಕ ತಾಸ ಕಾದಿದಕ್ಕ, ಹೆಬ್ಬಟ್ಟ ಒತ್ತಾಕ ಬಾ ಅಂದವರು ನಿಮ್ಮ ಮಗಾ ಎಲ್ಲಿದಾನ ಕರಕೊಂಡ ಬಾರೋ ಕಾಳಪ್ಪಾ ಅಂತೇಳಿ ವಾಪಸ್ ಕಳಿಸಿದ್ರು. ಬರಬೇಕಿದ್ದ ಈ ತಿಂಗಳ ರೇಷನ್ ಹಂಗ ಅಂಗಡಿಯೊಳಗ ಹುಳಾ ಹಿಡಿದಿತ್ತು.
ಮರುದಿನಾ ರೆಷನ್ ಅಂಗಡಿಗೆ ಹೊಗಿದ್ದ ಶಾಂತವ್ವ ಮತ್ತ ಕಾಳವ್ವ ಹೆಬ್ಬಟ್ಟ ಒತ್ತಿದರೂ ಅದು ರೆಜೆಸ್ಟರ್ ಮಾಡಕೊಳ್ಳಲಿಕ್ಕೆ ಒಲ್ಲೆ ಅಂತಾ ಇತ್ತು. ಕೈ ಒಳಗಿನ ಗೆರಿ ಯಾವಗೋ ಇವರಿಗೆ ಗೊತ್ತಯಿಲ್ಲದಂಗ ಅಳಿಸಿ ಹೊಗಿದ್ದು. ಕಡಿಗೆ ಗತಿಯಿಲ್ಲಾರದ ಹಳಸ ಮಾರಿ ಮಾಡಕೊಂಡ ಮನಿಗೆ ಬಂದ ಕುಂತಿದ್ರು. ಇಕಡೆ ಕೆಲಸ ಬಿಟ್ಟು ಧರಣಿಗೆ ಕುಳಿತಿದ್ದ ಮಂಜಪ್ಪಗ ಮತ್ತ 1000 ದಂಡ ಕಟ್ಟಿ ಕೆಲಸಕ್ಕ ಸೇರ್ರಿ ಅಂತ ಕಂಪನಿ ಮೋಬೈಲ್ ಮೆಡಮ್ ಹೇಳಿದ್ದಳು, ಆಪ್ ಆನ್ ಮಾಡಿದ ಕುಡಲೇ ಮತ್ತ ಕೆಲಸಾ ಬೇಕಂದರ್ ಮ್ಯಾನೆಜರ್ ಬೇಟಿ ಆಗ್ರಿ ಅಂತ ಮೆಸೆಜ್ ಬರ್ತಾಯಿತ್ತು. ಇಕಡೆ ಮಂಜಪ್ಪ ಎಗ್ ಪಪ್ ತಿಂದ ಮಲಕೊಂಡ್ರ ಅಲ್ಲೆ ಊರಾಗ ಅಪ್ಪಾ-ಅವ್ವ ಗೊಂಜಾಳ ರೋಟ್ಟಿ ಹಸಿ ಖಾರ ಅರದು ತಿಂದು ಮಲಗಿದ್ರು. ಮಂಜಪ್ಪನ ಪಟಪಟಿ ಪೆಂಟ್ರೋಲ್ ಇಲ್ಲಾರದ ಗುರಗುರ ಮಾಡಿ ಮಾರಿ ಸಪ್ಪ ಮಾಡಕೊಂಡ ನಿಂತಿತ್ತು.
ಅದ ಟೈಮ್ ಒಳಗ ಯಾವದೋ ಊರಾಗ ಯಾರದೋ ಅಪ್ಪ, ಅವ್ವನ ಮಾತಕೇಳಿ ಮಗಗ ಪಟಪಟಿ ಕೊಡಿಸಿದ್ದ. ಯಾರದೋ ಮಗಾ ದುಡದ್ ತಿನ್ನುನಂತ ಬೆಂಗಳೂರಿಗೆ ಬಂದಿದ್ದ. ಮಂಜ್ಯಾನಂಗ ಎಟೊ ಮಂದಿ ಮನ್ಯಾಗ ಉಪವಾಸ ಮಲ್ಕೊಂಡ್ಡಿದ್ರ ಅದ ಊರೋಳಗ ಯಾರಿಗೆ ತಣ್ಣನ ಐಸ್ಕ್ರಿಮ್ ತಿನ್ನುಂಗ ಆಗಿತ್ತು, ಯಾರದೋ ಮನಿ ಹುಡಗ ದೊಡ್ಡ ಮಂದಿ ಹೊಟ್ಟಿ ತಣ್ಣಿಗಿರಲಿ ಅಂತ ಬಿಸಲಾಗ ಡೆಲಿವೆರಿ ಕೊಡಾಕ ಹೊಗಿದ್ದ.
ರವಿರಂಜನ್, ಬರಹಗಾರ. ಒಂದು ವರ್ಷದಿಂದ ಮರ ಜೊತೆ ಕೆಲಸ ಮಾಡ್ತಾಯಿದ್ದಾರೆ.
ನಿನ್ನೆ ಅವ್ವ ಪೋನ್ ಮಾಡಿ, ರೇಷನ್ ಕಾರ್ಡಗೆ ಹೆಬ್ಬಟ್ಟ ಹಾಕಾಕ ಬರಬೇಕಂತ ಹಂಗ ಅದಕ್ಕ ಆಧಾರ್ ಕಾರ್ಡ ಕೋಡಬೇಕು ಯಾವಾಗ ಬರ್ತಿ ಅಂತ ಕೇಳಿದ್ದಳು.