ಆ ದಂಡೆ – ಈ ದಂಡೆ
Ravi Ranjan
ಮೊಬೈಲ್ ಅಲಾರಾಮ್ ಹೊಡದ ಮ್ಯಾಲ ಅದನ್ನ ಬಂದ ಮಾಡಿ, ಮತ್ತ ಐದ ನಿಮಿಷ ನಿದ್ದಿ ಮಾಡುದು ಅವಳ ರೂಡಿ. ಪಡಸಾಲಿಯಿಂದ ಒಳಗ ಬಂದ ಅವಳ ತಂಗಿ ಬಾಜು ಮೂರ ಮನಿಗೆ ಕೇಳು ಹಂಗ ಸವಕಾಶ ಒದರಿ ಎಬ್ಬಿಸಿದಳು. ಎರಡು ದಿನದ ಹಿಂದೆ ಮಾಡಿಸಿಕೊಂಡಿದ್ದ ಸರಕಾರದ ಇಂಜೆಕ್ಷನ್ಗ ಮೈಯಲ್ಲಾ ಮುಪ್ಪಾಗಿತ್ತು. ಎಡಗೈಗೆ ನಿನ್ನೆ ಹಿಡಿದಿದ್ದ ಜುಮ್ಮ ಇನ್ನು ಬಿಟ್ಟಾಂಗಿಲ್ಲಾ. ಎಡಮೂರ ಸಲ ಕೈ ಜಾಡಿಸಿ ಮೈ ಮುರುದು ಎದ್ದು ಬರ ಬರಾ ತಯಾರಾದಳು. ಅವಳಿಗಿಂತ ಮೊದಲ ತಯಾರಾಗಿದ್ದ ತಂಗಿ ಇವಳಿಗೂ ಬುತ್ತಿ ಕಟ್ಟಿ, ತಂದು ತಾ ತಗೊಂಡು ತನ್ನ ಗೆಳತಿ ಜೋಡಿ ಮುಂದೆ ಹೊಗಿದ್ದು ಇವಳಿಗೆ ಹೊಸದೇನು ಅಲ್ಲ.
ಮೆನ್ ರೋಡಿಲ್ಲಿ ಇನ್ನೊಂದಿಬ್ಬರು ಜೋಡಿ ಮಾಡಕೊಂಡು, ಬಸ್ಗೆ ಕಾಯಕೊಂಡು ನಿಂತಾಗ ಬಾಜು ಅಂಗಡ್ಯಾಗ ಅಪ್ಪ ಟೀ ಕುಡಕೊಂತ ಕುಂತಾವ ಇಕಿನಾ ನೋಡಿ, ಉಳಿದಿದ್ದ ಅರ್ದ ಟೀ ಕುಡುದು ಮುಂದೆ ಬಂದು ನಿಂತಕೊಂಡ. ಅವ ಬರೋದು ಬ್ಯಾಡಂತ ಎಷ್ಟ ಕೈ ಸನ್ನೆ ಮಾಡಿದ್ರು, ಮುದುಕ ಕೈ ಬಾಯಿ ಒರಸಕೊಂಡು ಬಾಜು ಬಂದು ನಿಂತ. ಇಷ್ಟರೋಳಗ ಬಸ್ಸ ಬರಬೇಕಿತ್ತು, ಲೇಟ್ ಆದ್ರ ಹಾಜರಿ ತಪ್ಪೊದು ಗ್ಯಾರಂಟಿ. ಬ್ಯಾಡಂದ್ರು ಅಪ್ಪ ದಿನಾ ಜೋಡಿ ಬರೋದು ಬಿಟ್ಟಿಲ್ಲಾ, ಯಾಕ ಈ ಇಳಿ ವಯಸ್ಸೋಳಗ ಬೇಕಾಗಿತ್ತು ಇವಂಗ. ಸುಮ್ಮನಾ ಮನ್ಯಾಗ ಬೆಚ್ಚಗ ಮಲಕೋಳುದು ಬಿಟ್ಟು-ಅಂತ ಹೇಳಬೇಕಾದ್ರ, ಬಸ್ಸು ಹೊಂಡ ಬಿದ್ದ ರೋಡೋಳಗ ಎದ್ದು-ಬಿದ್ದು ಮಂದೆ ಬಂದು ನಿಂತಕೊತು. ಮುಂಜಾನೆ ಆಗಿದ್ದಕ್ಕ ಬಸ್ಸ ಖಾಲಿಯಿತ್ತು. ಇವಳು ಮುಂದಿನಾ ಸಿಟನ್ಯಾಗ ಕುಂತ್ರ ಅವ ನಾಲಕ ಸಿಟ್ ಬಿಟ್ಟು ಕುಂತಾ.
ಎಲ್ಲರು ಅವಸರದಾಗ ಗಾರ್ಡನ್ ಮುಂದ ಬಂದ ನಿಂತಿದ್ರು. ಒಂದ ಕೈಯಾಗ ಬುತ್ತಿ ಚೀಲಾ ಮತ್ತೊಂದ ಕೈಯಾಗ ಉದ್ದ ಕಸಬರಗಿ, ಮೈಮ್ಯಾಲ ಗರ್ವಮೆಂಟ ಕೊಟ್ಟಿದ್ದ ಹಸಿರ ಕೊಟ್ ಹಾಕೊಂಡು ಲೈನ್ ಒಳಗ ನಿಂತು ಕೈಗೆಲ್ಲಾ ಸ್ಯಾನಿಟೈಸರ್ ಹಚ್ಚೊಕೊಳ್ಳತಿದ್ರು. ಹಿಂದಿನ ಐದು ತಿಂಗಳಿಂದ ಗೌರ್ನಮೆಂಟು ಪಗಾರ ಕೊಟ್ಟಿಲ್ಲಾ ಅಂತ ಬಾಳ ಮಂದಿ ಚಿಂತಿಯೋಳಗಿದ್ದರ. ಒಂದಿಷ್ಟ ಮಂದಿ ನಿನ್ನಿ ಇಂಜೆಕ್ಷನ್ ಹೆಂಗ ತ್ರಾಸ್ ಮಾಡಿತು ಅನ್ನೊದನ್ನ ವಿವರಿಸ್ತಾಯಿದ್ರು.ಇದರ ನಡು ಪಿಯಪ್ ವಿಚಾರ ಬಾಳ ಜೊರಾಗಿ ಕೇಳಿ ಬರತಿತ್ತು. ಮುಂದೆ ನಿಂತಿದ್ದ ಗಂಡಸನ ಕಡೆ ಬಂದು, ಒಬ್ಬರಾದ ಮೇಲೆ ಒಬ್ಬರು ಅವ ಹಿಡಕೊಂಡಿದ್ದ ಮಷಿನ್ ಒಳಗ ಹೆಬ್ಬಟ್ಟ ಒತ್ತಿ ಹೊಗತ್ತಿದ್ದ್ರು. ಇಕಿ ಮುಂದ ಬಂದು ಅಟೆಂಡ್ನೆಸ್ ಹಾಕಿ ಇವತ್ತರ ಪಿಯಪ್ ಮಾಡಿಸಿಕೊಡು ಅಂತ ಸಾವಿರ ರೂಪಾಯಿ ಅವನ ಕಿಸೆಯೊಳಗ ತುರುಕಿದಳು. ಅವ ನಿನ್ನ ಮ್ಯಾಲ ಕಂಪ್ಲೆಟ್ ಐತಿ ಆಮ್ಯಾಲ ಸಿಗತೇನಿ ಅಂತ ಹೇಳಿದಕ್ಕ, ಅವನ ಮನಿ ಮುಂದ ನಾ ಕಸನಾ ತಗಿಯುದಿಲ್ಲ ಅಂತ ಜೋರ ಮಾಡಿ ಕೆಲಸಕ್ಕೆ ಹೋದಳು.
ದಾರಿ ಕಸ ತೆಗಿಬೇಕಾದರ, ಯಾಕ ಮತ್ತ ಗಂಡನ ಮನಿಗೆ ಹೋಗುದಿಲ್ಲೇನ ಅಂತ ಕೇಳಿದ್ದಕ್ಕ, ಅಕಿ ಮೂಖ ಸಿಂಡರಸಕೊಂಡು ಇನ್ನೊಂದ ದಂಡಿಯಿಂದ ಕಸ ಹುಡಗಲಿಕ್ಕ ಹೋದಳು.ಹೋದ ವರ್ಷ ಎಷ್ಷ ಆರಾಮಿತ್ತು. ರೋಡ ನೋಳಗ ಮಂದಿನಾ ಇರತಿರಲಿಲ್ಲಾ. ಇವರು ಆಕಡಿ ಇಕಡೆ ಒಡಾಡಕೊಂಡಿದ್ದರು. ಆವಾಗ ಹೋಗಾಕ ಬರಾಕ ತ್ರಾಸ ಆಕೈತಿ ಅಂತ ಗಂಡನ ಮನಿ ಬಿಟ್ಟು ಬಂದಕಿ ಮತ್ತ ಆ ಕಡೆ ತಲಿ ಹಾಕಿರಲಿಲ್ಲ. ಇದ ಟೈಂನೊಳಗ, ಒಂದ ಮುಂಜಾನೆ ಹಿಂಗ ಮೊದಲನೆ ಪಾಳಿ ಮುಗಿಸಿ, ರೋಡ್ ಕ್ರಾಸ್ ನ್ಯಾಗ ದ್ವಾಸಿ ತಿನ್ನ ಬೇಕಾದರ. ತಲಿ ತಿರುಗಿ ಬಿದ್ದಿದ್ದಳು. ನಾಕ ಮಂದಿ ವಿಚಾರಿಸಿದಾಗ ತಿಳಿತು. ಮಗ ತಲಿ ಒಡಕೊಂಡಾನ, ಇಕಿಗೆ ಅರ್ಜಂಟ್ ಬರಬೇಕಂತ ಪೋನ್ ಮಾಡ್ಯಾರ. ಹಂಗೋ ಹಿಂಗೋ ಮಾಡಿ ಗಾಡಿ ಹೊಂದಿಸಿ, ರೋಡನ್ಯಾಗಿರೋ ಪೋಲಿಸರನ್ನ ತಪ್ಪಿಸಿ ಊರ ಮುಟ್ಟುದೋರಳಗ ಎಲ್ಲ ಮುಗಿದಿತ್ತು. ಎಲ್ಲರೂ ಅವ ತೆಟ್ ಗಾಂಧಿ ಹಂಗ ಕಾಣತ್ತಾನ ನೋಡ ಅಂತ ಹೇಳತ್ತಿದ್ದರ. ಇಗಾ ಅವನು ಇಲ್ಲ. ಮೋಬೈಲ್ ಒಳಗ ಅವನ ಪೋಟೋ ಅಷ್ಟ ಐತಿ. ಇದನ್ನ ನೆನಸಕೊಂಡು ದಾರಿ ಎಲ್ಲ ಕಸಗೊಡಿಸಿ ಮುಗಸಿದ್ದಳು.
ಇಕಡೆ ದಂಡಿಗೆ ತಾ ಯಾಕ ಗಂಡನ ಮನಿಗೆ ಹೋಗುದಿಲ್ಲಂತ ಇಕಿ ಹೇಳಬೇಕಾದರ. ಅವಳಿಗೆ ಪೋನ್ ಬಂತು. ಬಾಳ ಹೊಟ್ಟೆಹಸು ಆಗೇದ, ಜದ್ಲಿ ಊಟಾತಗೋಂಡ ಬಾ ಅಂತ. ಸ್ವಲ್ಪ ದಿನದ ಹಿಂದ ಜೋಡಿ ಕೆಲಸಾ ಮಾಡಕಿಗೆ ಏನು ತ್ರಾಸ್ ಅಂತ ದಾವಾಖಾನಿಗೆ ಸೇರಿಸಿ ಬಂದಿದ್ದಳು. ಮುಂದಿಂದ್ದು ಅಲ್ಲಿ ತನಕಾ ಸ್ವಲ್ಪ ಕಸಾ ಒತ್ತಿ ಬಿಡು ಅಂತ ಹೇಳಿ, ಐದ ಊಟ ಪಾರ್ಸಲ್ ಮಾಡಸಕೊಂಡು ದಾವಾಖಾನಿಗೆ ಹೋದ್ರ ಅಕಿ, ಅವ್ವ, ತಂಗಿ ಮತ್ತ ಗಂಡ ಬಂದು ಸಾಲಕ ಬಾಜು ಬೆಡ್ ಮ್ಯಾಲ ಕುಂತಿದ್ದರು. ಯಾರು ಒಂದು ಬಿಸ್ಕಟ್ ಪ್ಯಾಕಟ ತರಲಾರದು ಇಕಿ ಗಮನಿಸಿದ್ದಳು. ಟೈಂ ನೋಡಿ ಅಲ್ಲಿಂದ ಜಾಗಾ ಖಾಲಿ ಮಾಡಿದ್ದಳು. ನಿನ್ನೆ ಮನಿಕೆಲಸಕ್ಕ ಹೋಗಿಲ್ಲಾ ಮಾಲಕ ಎನಾಂತಾಳೋ ಅಂತ ಯೋಚನೆ ಮಾಡಕೊಂಡು ಮನಿ ಮುಟ್ಟುದೋರಳಗ ಭಾಳ ಟೈಂ ಆಗಿತ್ತು. ಮೂಲಿಯೊಳಗ ಎರಡ ದಿನದ ಅರವಿನೆಲ್ಲಾ ಗ್ವಾಳೆ ಹಾಕಿ ಇಟ್ಟಿದ್ದರು. ಅದನೆಲ್ಲಾ ತಗೋಂಡು, ಮನಿ ಕೆಲಸಾ ಮುಗಿಸಿ ಮನಿಗೆ ಬಂದ್ರ. ಮುಂಜಾನೆ ಮಾಡಿಟ್ಟಿದ್ದ ಎಲ್ಲಾ ಅಡಗಿ ಖಾಲಿ ಯಾಗಿ, ಬಾಂಡೆಯಲ್ಲಾ ಬಚ್ಚಲದಾಗ ಗ್ವಾಳೆ ಹಾಕಿದ್ದರು.
This is an exercise in translation. Our attempt is to demonstrate the difference in dialects of Kannada and what often gets lost in translation. The feeling of the piece heard aloud in a North Karnataka dialect is drastically different when heard in a Mysore dialect. The sound of every dialect carries its own tone, emotion and flow and we realised that, with translations, the only possibility is to perhaps convey the essence. For anything more, one will need to learn the language and most importantly, pay attention to the sound of the dialect.
ಆ ದಂಡೆ – ಈ ದಂಡೆ – Translated by Basvachar. S
ಮೊಬೈಲ್ ಅಲಾರಾಮ್ ಹೊಡೆದಮೇಲೆ ಅದನ್ನು ನಿಲ್ಲಿಸಿ ಇನ್ನೂ ಐದು ನಿಮಿಷ ನಿದ್ರೆ ಮಾಡುವುದು ಅವಳ ಅಭ್ಯಾಸ. ನಡುಮನೆಯಿಂದ ಒಳಗೆ ಬಂದ ಅವಳ ತಂಗಿ ಪಕ್ಕದ 3 ಮನೆಗೆ ಕೇಳುವ ಹಾಗೆ ಕೂಗಿ ಎಬ್ಬಿಸಿದಳು. ಎರಡು ದಿನದ ಹಿಂದೆ ಹಾಕಿಸಿಕೊಂಡ ಸರಕಾರದ ಇಂಜೆಕ್ಷನ್ಗೆ ಮೈಯಲ್ಲಾ ಮುಪ್ಪಾಗಿತ್ತು. ಎಡಗೈಗೆ ನಿನ್ನೆ ಹಿಡಿದಿದ್ದ ನೋವು ಇನ್ನು ಬಿಟ್ಟಿಲ್ಲ. ಎರಡು ಮೂರು ಸಲ ಕೈ ಜಾಡಿಸಿ ಬೇಗ ಬೇಗ ತಯಾರಾದಳು, ಅವಳಿಗಿಂತ ಮೊದಲೇ ತಯಾರಾಗಿದ್ದ ತಂಗಿ ಇವಳಿಗೂ ಬುತ್ತಿ ಕಟ್ಟ, ಅವಳದು ಮಾತ್ರ ತೆಗೆದುಕೊಂಡು ಸ್ನೇಹಿತರೊಡನೆ ಮುಂದೆ ಹೋಗಿದ್ದು ಇವಳಿಗೆ ಹೊಸತೇನೂ ಅಲ್ಲ. ಮೆನ್ ರೋಡಿನಲ್ಲಿ ಇನ್ನೊಬ್ಬರ ಜೊತೆ ಬಸ್ಸಿಗಾಗಿ ಕಾಯುವಾಗ, ಪಕ್ಕದಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಅಪ್ಪ ಇವಳನ್ನು ನೋಡಿ ಉಳಿದ ಅರ್ಧ ಟೀ ಕುಡಿದು ಮುಂದೆ ಬಂದು ನಿಂತುಕೊಂಡ. ಬರುವುದು ಬೇಡ ಅಂತ ಎಷ್ಟೇ ಕೈ ಸನ್ನೆ ಮಾಡಿದ್ರು, ಮುದುಕ ಕೈ ಬಾಯಿ ಒರೆಸಿಕೊಂಡು ಹತ್ತಿರ ಬಂದು ನಿಂತ. ಇಷ್ಟರಲ್ಲೆ ಬಸ್ಸು ಬರಬೇಕಿತ್ತು ಲೇಟ್ ಆದ್ರೆ ಅಟೆಂಡನ್ಸ ತಪ್ಪೋದು ಗ್ಯಾರೆಂಟಿ. ಬೇಡ ಬೇಡ ಅಂದ್ರು ಅಪ್ಪ ದಿನಾ ಜೊತೆ ಬರೋದು ಬಿಟ್ಟಿಲ್ಲ, ಯಾಕೆ ಬೇಕಿತ್ತು ಈ ಇಳಿ ವಯಸಲ್ಲಿ ಇವನಿಗೆ ಸುಮ್ಮನೆ ಮನೆಯೊಳಗೆ ಬೆಚ್ಚಗೆ ಮಲ್ಕಳೋದು ಬಿಟ್ಟು. ಅಂತ ಹೇಳುವ ಹೊತ್ತಿಗೆ ಹಳ್ಳ ಬಿದ್ದಿರೋ ರೋಡಲ್ಲಿ ಬಸ್ಸು ಬಂದು ಮುಂದೆ ನಿಂತಿತು, ಇನ್ನು ಬೆಳಿಗ್ಗೆ ಆದದ್ರಿಂದ ಬಸ್ಸು ಖಾಲಿ ಖಾಲಿಯಾಗಿತ್ತು. ಇವಳು ಮುಂದಿನ ಸೀಟಿನಲ್ಲಿ ಕೊತುಕೊಂಡರೆ ಅವನು ನಾಲ್ಕು ಸೀಟು ಬಿಟ್ಟು ಹಿಂದೆ ಕುಳಿತ. ಎಲ್ಲರು ಅವಸರದಲ್ಲಿ ಗಾರ್ಡನ್ ಮುಂದೆ ಬಂದುದ ನಿಂತಿದ್ರು. ಒಂದು ಕೈಯಲ್ಲಿ ಟಿಫನ್ ಚೀಲ ಮತ್ತೊಂದು ಕೈಯಲ್ಲಿ ಉದ್ದನೆಯ ಕಸಪೊರಕೆ ಮೈಮೇಲೆ ಗರ್ವನಮೆಂಟ್ ಕೊಟ್ಟಿದ್ದ ಹಸಿರು ಕೋಟು ಹಾಕಿಕೊಂಡು, ಲೈನನಲ್ಲಿ ನಿಂತು ಕೈಗೆಲ್ಲಾ ಸ್ಯಾನಿಟೈಸರ್ ಹಾಕ್ಕೊತ್ತಿದ್ರು. ಹಿಂದಿನ ಐದು ತಿಂಗಳಿಂದ ಗರ್ವನಮೆಂಟು ಸಂಬಳ ಕೊಟ್ಟಿಲ್ಲ ಅಂತ ಚಿಂತೆಯಲ್ಲಿದ್ದರೆ, ಇನ್ನೊಂದಿಷ್ಟು ಜನ ನಿನ್ನೆ ತಗೊಂಡ ಇಂಜೆಕ್ಷನ್ (ವ್ಯಾಕ್ಷಿನ್) ನಿಂದ ಎನೆಲ್ಲಾ ಕಷ್ಟವಾಯಿತು ಅಂತ ವಿವರಸ್ತಾಯಿದ್ರು. ಇದರ ಮದ್ಯದಲ್ಲೇ ಪಿ.ಎಪ್ ವಿಚಾರ ಬಹಳ ಜೋರಾಗಿ ಕೇಳಿಬರುತ್ತಿತ್ತು. ಮುಂದೆ ನಿಂತಿದ್ದ ಗಂಡಸಿನ ಹತ್ತಿರ ಬಂದು ಅವನ ಹಿಡಿದು ಕೊಂಡಿದ್ದ ಮಷಿನ್ ಅಲ್ಲಿ ಹೆಬ್ಬೆಟ್ಟು ಒತ್ತಿ ಹೊಗುತ್ತಿದ್ದರು. ಇವಳು ಸಹ ಮುಂದೆ ಬಂದು ಅಟೆಂಡೆನ್ಸ ಹಾಕಿ, ಇವತ್ತಾದರು ಪಿ.ಎಪ್ ಮಾಡಿಸಿಕೊಡು ಅಂತ ಒಂದು ಸಾವಿರ ರೂಪಾಯಿ ಅವನ ಜೇಬಿನೊಳಗೆ ತುರುಕಿದಳು. ಅದಕ್ಕವನು ನಿನ್ನ ಮೇಲೆ ಕಂಪ್ಲೆಂಟ ಇದೆ ಆಮೇಲೆ ಸಿಗುತ್ತೆನೆ ಎಂದಿದ್ದಕ್ಕೆ ಅವನ ಮನೆ ಮುಂದೆ ನಾನು ಕಸ ತೆಗೆಯುದಿಲ್ಲ ಅಂತಾ ಜೋರು ಮಾಡಿ ಕೆಲಸಕ್ಕೆ ಹೋದಳು. ದಾರಿ ಕಸ ತೆಗೆಯಬೇಕಾದರೆ, ಯಾಕೆ ಗಂಡನ ಮನೆಗೆ ಹೋಗುದಿಲ್ಲವಾ? ಅಂತ ಕೇಳಿದ್ದಕ್ಕೆ ಮುಖ ಸಿಂಡರಿಸಿಕೊಂಡು ಇನ್ನೊಂದು ಕಡೆಯಿಂದ ಕಸ ಗುಡಿಸಲು ಹೋದಳು. ಕಳೆದ ವರ್ಷ ಎಷ್ಟು ಆರಾಮವಾಗಿತ್ತು, ರೋಡಿನೊಳಗೆ ಜನಗಳೇ ಇರುತ್ತಿರಲಿಲ್ಲ ಇವರು ಆಕಡೆ ಈಕಡೆ ಓಡಾಡಿಕೊಂಡಿದ್ದರು. ಅವಾಗ ಹೋಗುವುದಕ್ಕೆ ಬರುವುದಕ್ಕೆ ಕಷ್ಟವಾಗುತ್ತೆ ಅಂತ ಗಂಡನ ಮನೆ ಬಿಟ್ಟು ಬಂದವಳು ಮತ್ತೆ ಆ ಕಡೆ ತಲೆ ಹಾಕಿರಲಿಲ್ಲ. ಇದೇ ಸಮಯದಲ್ಲಿ ಒಂದು ಬೆಳಗ್ಗೆ ಕೆಲಸ ಮುಗಿಸಿಕೊಂಡು ರೋಡಿನ ಕ್ರಾಸಿನಲ್ಲಿ ದೋಸೆ ತಿನ್ನುವಾಗ ತಲೆತಿರುಗಿ ಬಿದ್ದಿದ್ದಳು. ನಾಲ್ಕು ಮಂದಿ ವಿಚಾರಿಸಿದಾಗ ತಿಳಿದಿದ್ದು ಮಗನ ತಲೆಗೆ ಪೆಟ್ಟಾಗಿದೆ, ಇವಳಿಗೆ ಅರ್ಜೆಂಟಾಗಿ ಫೋನ್ ಮಾಡಿದ್ದಾರೆ. ಹಂಗೋ ಹಿಂಗೋ ಮಾಡಿ ದಾರಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಸೇರುವುದರೊಳಗೆ ಎಲ್ಲ ಮುಗಿದಿತ್ತು. ಎಲ್ಲರೂ ಅವನನ್ನು ಥೆಟ್ ಗಾಂಧಿ ತರಾನೇ ಕಾಣಿಸ್ತಾನೆ ಅಂತ ಹೇಳ್ತಾ ಇದ್ರು. ಈಗ ಅವನು ಇಲ್ಲ ಮೊಬೈಲ್ ಒಳಗೆ ಮಾತ್ರ ಅವನ ಫೋಟೋ ಇದೆ. ಅದನ್ನೇ ನೆನಪಿಸಿಕೊಂಡು ದಾರಿಯ ಎಲ್ಲ ಕಸಗುಡಿಸಿ ಮುಗಿಸಿದ್ದಳು. ಈ ಕಡೆಗೆ ಯಾಕೆ ಗಂಡನ ಮನೆಗೆ ಇವಳು ಹೋಗುವುದಿಲ್ಲ ಅಂತ ಹೇಳಬೇಕಾದರೆ ಅವಳಿಗೆ ಫೋನ್ ಬಂತು. ಬಹಳ ಹೊಟ್ಟೆ ಹಸಿವಾಗಿದೆ ಜಲ್ದಿ ಊಟ ತೆಗೆದುಕೊಂಡು ಬಾ ಅಂತ, ಸ್ವಲ್ಪ ದಿನದ ಹಿಂದೆ ಜೊತೆಯಾಗಿ ಕೆಲಸ ಮಾಡುವವಳಿಗೆ ಏನು ತೊಂದರೆ ಅಂತ ಹಾಸ್ಪಿಟಲ್ಗೆ ದಾಖಲೆ ಮಾಡಿ ಬಂದಿದ್ದಳು. ಜೊತೆಗಾರರಿಗೆ ಅಲ್ಲಿ ತನಕ ಕಸ ಮಿನಿ ತೆಗೆದುಬಿಡು ಎಂದು ಹೇಳಿ, 5 ಊಟ ಪಾರ್ಸೆಲ್ ಮಾಡಿಸಿಕೊಂಡು ಆಸ್ಪತ್ರೆಗೆ ಹೋದಳು. ಅಲ್ಲಿ ಅವಳ ಅಮ್ಮ ತಂಗಿ ಮತ್ತು ಗಂಡ ಎಲ್ಲರೂ ಸಾಲಾಗಿ ಪಕ್ಕದ ಬೆಡ್ ಮೇಲೆ ಕುಳಿತಿದ್ದರು. ಯಾರು ಸಹ ಒಂದು ಬಿಸ್ಕೆಟ್ ಪ್ಯಾಕೆಟನ್ನೂ ಸಹ ತರದೆ ಇದ್ದದ್ದನ್ನು ಗಮನಿಸಿ ಸಮಯ ನೋಡಿಕೊಂಡು ಜಾಗ ಖಾಲಿ ಮಾಡಿದಳು. ನಿನ್ನೆ ಮನೆಕೆಲಸಕ್ಕೆ ಹೋಗಿಲ್ಲ, ಮನೆಯ ಮಾಲಕಿ ಏನು ಎನ್ನುತ್ತಾಳೆ ಅಂತ ಯೋಚನೆ ಮಾಡಿಕೊಂಡು ಮನೆ ಸೆರೋದ್ರೊಳಗೆ ಬಹಳ ಲೇಟ್ ಆಗಿತ್ತು. ಮೂಲೆಯೊಳಗೆ ಎರಡು ದಿನದ ಬಟ್ಟೆಗಳನೆಲ್ಲಾ ಗುಡ್ಡೆ ಹಾಕಿದ್ದರು ಅದನ್ನೆ ತೆಗೆದುಕೊಂಡು ಮನೆ ಕೆಲಸ ಮುಗಿಸಿ, ಮನೆಗೆ ಬಂದರೆ ಬೆಳಗ್ಗೆ ಮಾಡಿಟ್ಟಿದ್ದ ಅಡುಗೆಯೆಲ್ಲಾ ಖಾಲಿಯಾಗಿತ್ತು. ಬಾಂಡಲಿ ಗಳನ್ನೆಲ್ಲ ಬಚ್ಚಲುಮನೆಯಲ್ಲಿ ಗುಂಡಿ ಹಾಕಿದ್ದರು.